ನೌಕಾಸೇನಾ ಬಂಡಾಯ-
ಭಾರತವನ್ನಾಳುತ್ತಿದ್ದ ಬ್ರಿಟಿಷ್ ಸರ್ಕಾರದ ವಿರುದ್ಧ 1946ರ ಫೆಬ್ರುವರಿಯಲ್ಲಿ ಭಾರತದ ರಾಯಲ್ ಇಂಡಿಯನ್ ನೌಕಾಸೇನೆಯವರು ನಡೆಸಿದ ಬಂಡಾಯ. ಬ್ರಿಟಿಷರು ಭಾರತೀಯರ ಕೈಗೆ ಅಧಿಕಾರವನ್ನು ಕೊಟ್ಟು ನಿರ್ಗಮಿಸುವ ತೀರ್ಮಾನವನ್ನು ತ್ವರೆಗೊಳಿಸಲು ಇದೂ ಕಾರಣವಾಯಿತು. ಭಾರತದ ವಿಮೋಚನೆಗಾಗಿ ಸುಭಾಷ್ ಚಂದ್ರ ಬೋಸರ ನೇತೃತ್ವದಲ್ಲಿ ರಚಿತವಾಗಿದ್ದ ಭಾರತ ರಾಷ್ಟ್ರೀಯ ಸೇನೆಯ ಯೋಧರನ್ನು ಬ್ರಿಟಿಷರು ದ್ರೋಹದ ಆಪಾದನೆಯ ಮೇಲೆ ಭಾರತದಲ್ಲಿ ವಿಚಾರಣೆಗೆ ಗುರಿಪಡಿಸಿದ್ದರು (1945). ಇದು ರಾಜಕೀಯವಾಗಿ ವಿವೇಕರಹಿತ ಕ್ರಮವಾಗಿತ್ತು. ಇದರಿಂದ ಭಾರತಾದ್ಯಂತ ಉಗ್ರಕ್ಷೋಭೆ ಉಂಟಾಯಿತು. ಈ ವಿಚಾರಣೆಯ ವಿರುದ್ಧ ಅನೇಕ ನಗರಗಳಲ್ಲಿ ಪ್ರದರ್ಶನಗಳು ನಡೆದುವು. ಪ್ರತಿಭಟನೆ ವ್ಯಕ್ತಪಟ್ಟಿತು. ನೌಕಾ ಉದ್ಯೋಗಿಗಳು ದಂಗೆ ಏಳಲು ಇದು ಪರೋಕ್ಷವಾಗಿ ಕಾರಣವಾಯಿತೆಂದು ಹೇಳಬಹುದು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡದಿದ್ದುದರಿಂದ ದೇಶದಲ್ಲೆಲ್ಲ ಹಬ್ಬಿದ್ದ ಅಸಮಾಧಾನ ನೌಕಾಸೇನೆಗೂ ವ್ಯಾಪಿಸಿತ್ತು.

	ಈ ಬಂಡಾಯ ಮೊದಲು ಮುಷ್ಕರ ರೂಪದಲ್ಲಿ ಮುಂಬಯಿಯ ಬಂದರಿನಲ್ಲಿ ಆರಂಭವಾಗಿ, ಕೊನೆಗೆ ಭಾರತದ ಇತರ ಬಂದರುಗಳಿಗೆ ಹರಡಿತು. ಕೇಂದ್ರ ಮುಷ್ಕರ ಸಮಿತಿಯ ಆದೇಶದ ಮೇರೆಗೆ ಸಿಗ್ನಲ್ ಶಾಲೆಯ ನೌಕಾ ಸಿಬ್ಬಂದಿಯವರು 1946ರ ಫೆಬ್ರವರಿ 18ರಂದು ಮುಷ್ಕರ ಆರಂಭಿಸಿದರು. ಇವರ ಜೊತೆಗೆ ವಿವಿಧ ನೌಕಾ ಸಿಬ್ಬಂದಿಯವರು ಸೇರಿಕೊಂಡರು. ಬ್ರಿಟಿಷರ ವರ್ಣಭೇದ ನೀತಿ. ಕಡಿಮೆ ಸಂಬಳ, ಕಳಪೆ ಆಹಾರ ವ್ಯವಸ್ಥೆ ಇವುಗಳ ವಿರುದ್ಧವಾಗಿ ಇವರು ಚಳವಳಿ ನಡೆಸಿದರು. ಸ್ವಾಭಿಮಾನಕ್ಕೆ ಕುಂದು ಬರುವಂತೆ ಬ್ರಿಟಿಷ್ ನೌಕಾಧಿಕಾರಿಯೊಬ್ಬ ಮಾಡಿದ ಟೀಕೆಗಳಿಂದ ಇವರು ರೊಚ್ಚಿಗೆದ್ದಿದ್ದರು. ಪ್ರತಿಭಟನೆಗೆ ಇದೇ ಸಮೀಪದ ಕಾರಣ. ನೌಕಾ ವಾಹನಗಳ ಮೇಲೆ ಭಾರತದ ರಾಷ್ಟ್ರೀಯ ನೌಕೆಯ ನಾಮಫಲಕಗಳನ್ನು ಅಂಟಿಸಿ ರಾಷ್ಟ್ರಧ್ವಜವನ್ನು ಹಾರಿಸಲಾಯಿತು. ತಮ್ಮ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ಭಾರತೀಯರ ಸೈನ್ಯವನ್ನು ಇಂಡೋನೇಷ್ಯದಿಂದ ವಾಪಸ್ ಕರೆಸಿಕೊಳ್ಳಬೇಕೆಂಬುದೂ ಇವರ ಆಗ್ರಹವಾಗಿತ್ತು. ಭಾರತ ಬಿಟ್ಟು ತೊಲಗಿ, ಜೈ ಹಿಂದ್ ಎಂಬ ಘೋಷಣೆಗಳನ್ನು ಇವರು ಕೂಗಲಾರಂಭಿಸಿದರು. ಕೆಲವು ಕಡೆಗಳಲ್ಲಿ ಇವರ ಪ್ರದರ್ಶನಗಳು ಉಗ್ರವಾಗಿದ್ದುವು. ಇವುಗಳಿಂದ ಜನಜೀವನ ಅಸ್ತವ್ಯಸ್ತವಾಯಿತು. ಪೋಲಿಸರು ಗುಂಡು ಹಾರಿಸಿದರು. ಅನೇಕರು ಗಾಯಗೊಂಡರು. ಕೆಲವರನ್ನು ದಂಗೆಯ ಆಪಾದನೆಯ ಮೇಲೆ ಬಂಧಿಸಲಾಯಿತು. ಉದ್ರಿಕ್ತ ದಂಗೆಕೋರರು ಕ್ಯಾಸಲ್ ಪಾಳೆಯದಿಂದ ಅಸ್ತ್ರಗಳನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಪರಿಸ್ಥಿತಿ ಉಲ್ಬಣಗೊಂಡು ಅಧಿಕಾರಿಗಳ ಕೈಮೀರಿತು. ನೌಕಾ ಸಿಬ್ಬಂದಿಯವರು ಕೆಲವು ಹಡಗುಗಳನ್ನು ವಶಪಡಿಸಿಕೊಂಡು ಸೇನಾ ರಕ್ಷಾ ದಳದ ಮೇಲೆ ಗುಂಡು ಹಾರಿಸಲು ಸಜ್ಜಾದರು. ರಾಯಲ್ ಇಂಡಿಯನ್ ನೌಕೆಯ ಫ್ಲ್ಯಾಗ್ ಅಧಿಕಾರಿ ಅಡ್ಮಿರಲ್ ಗಾಡ್‍ಫ್ರಿ ಆಕಾಶವಾಣಿಯ ಮೂಲಕ ನೌಕಾ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿ, ಚಳವಳಿಯನ್ನು ನಿಲ್ಲಿಸಿ ಶರಣಾಗುವಂತೆ ಕರೆ ನೀಡಿದ. ಜೊತೆಗೆ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಿದ. ನೌಕಾ ಸಿಬ್ಬಂದಿ ಮತ್ತು ಸೇನಾ ರಕ್ಷಾ ದಳದ ನಡುವೆ ಗುಂಡುಗಳ ವಿನಿಮಯವಾಯಿತು. ನೌಕಾ ಸಿಬ್ಬಂದಿಯವರು ಅಸ್ತ್ರಗಳನ್ನು ವಶಪಡಿಸಿಕೊಂಡರು.

	ಇವರ ಜೊತೆಗೆ ಇತರ ನಾಗರಿಕರು ಸೇರಿ ಲೂಟಿ ಹಲ್ಲೆಗಳಲ್ಲಿ ತೊಡಗಿದುದರಿಂದ ಪರಿಸ್ಥಿತಿ ದಿನೇ ದಿನೇ ಹದಗೆಡತೊಡಗಿತು. ವಲ್ಲಭಭಾಯಿ ಪಟೇಲರು ಮಧ್ಯಪ್ರವೇಶ ಮಾಡಿದ್ದರಿಂದ ಪರಿಸ್ಥಿತಿ ಸುಧಾರಿಸಿತು. ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಾಯಕರು ಚಳವಳಿ ನಿಲ್ಲಿಸುವಂತೆ ಮನವಿ ಮಾಡಿದಾಗ್ಯೂ ಮುಂಬಯಿಯಲ್ಲಿ ಮುಷ್ಕರ, ಹರತಾಳ, ಹಲ್ಲೆಗಳು ಮುಂದುವರಿದುವು. ಅಂಚೆ ಕಛೇರಿ ಪೋಲೀಸ್ ಠಾಣೆಗಳಿಗೆ ಬೆಂಕಿ ಹಚ್ಚಲಾಯಿತು. ಪೋಲೀಸ್ ಬಲದಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಲಿಲ್ಲ. ಕೊನೆಗೆ ಸೈನ್ಯದ ಸಹಾಯದಿಂದ ಗಲಭೆಯನ್ನು ಹತ್ತಿಕ್ಕಲಾಯಿತು. ಈ ಗಲಭೆಯ ಪರಿಣಾಮವಾಗಿ ಸತ್ತವರ ಸಂಖ್ಯೆ ಸುಮಾರು 200. ವಲ್ಲಭ ಭಾಯಿ ಪಟೇಲರ ಪ್ರಯತ್ನದಿಂದ 1946ರ ಫೆಬ್ರುವರಿ 23ರಂದು ಚಳವಳಿ ನಿಂತಿತು. ಯಾವ ನೌಕೋದ್ಯೋಗಿಗಳನ್ನೂ ಶಿಕ್ಷಿಸಬಾರದೆಂದು ಮೌಲನಾ ಅಬುಲ್ ಕಲಾಮ್ ಆeóÁದರು ದಂಡನಾಯಕರಿಗೆ ಮನವಿ ಮಾಡಿದರು.

	ಮುಂಬಯಿಯಲ್ಲಿ ನಡೆದ ಘಟನೆಯ ಪರಿಣಾಮ ಇತರ ಬಂದರುಗಳಲ್ಲೂ ಕಾಣಿಸಿಕೊಂಡಿತು. ಕರಾಚಿ, ಮದ್ರಾಸ್, ಕಲ್ಕತ್ತ, ವಿಶಾಖಪಟ್ಟಣಗಳ ನೌಕಾಸಿಬ್ಬಂದಿಯವರು ಮುಂಬಯಿಯ ಸಹೋದ್ಯೋಗಿಗಳ ಬೇಡಿಕೆಗಳ ಬೆಂಬಲ ನೀಡಿ ಮುಷ್ಕರ ನಡೆಸಿದರು. ಹಿಂದೂಸ್ತಾನಿ ನೌಕಾಸಿಬ್ಬಂದಿಯವರು ಕರಾಚಿಯಲ್ಲಿ ನಡೆಸಿದ ಪ್ರತಿಭಟನೆ ಉಗ್ರವಾಗಿ, ಹಿಂಸಾರೂಪ ತಳೆಯಿತು. ಕೊನೆಗೆ ಸೇನಾ ಪಡೆಯ ನೆರವಿನಿಂದ ಇದನ್ನು ಹತೋಟಿಗೆ ತರಲಾಯಿತು. ಭೂ ವಾಯು ಸೈನ್ಯಗಳು ಈ ಘಟಕಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ತಟಸ್ಥವಾಗಿರಲಿಲ್ಲ. ದೆಹಲಿ ಮತ್ತು ಮದರಾಸಿನ ವಾಯುಸೇನಾ ಸಿಬ್ಬಂದಿಯವರು ರಾಯಲ್ ಇಂಡಿಯನ್ ನೌಕಾ ಸಿಬ್ಬಂದಿಯವರಿಗೆ ಬೆಂಬಲ ನೀಡಿ ಮುಷ್ಕರ ನಡೆಸಿದರು. ಮುಂಬಯಿಯ ಅಂಧೇರಿ ಮತ್ತು ಮೆರೀನ್ ಡ್ರೈವ್‍ನ ರಾಯಲ್ ಇಂಡಿಯನ್ ಭೂಸೈನ್ಯ ಸಿಬ್ಬಂದಿಯವರು ಸಭೆ ಸೇರಿ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದರು.

	ಭಾರತಕ್ಕೆ ಸ್ವಾತಂತ್ರ್ಯ ನೀಡುವ ವಿಚಾರವಾಗಿ ಸಮಾಲೋಚನೆ ನಡೆಸಲು ಭಾರತಕ್ಕೆ ಬರಲಿದ್ದ ಬ್ರಿಟಿಷ್ ಸಂಪುಟ ಆಯೋಗದ ಸದಸ್ಯರ ಹೆಸರುಗಳನ್ನು ಈ ಬಂಡಾಯ ಆರಂಭವಾದ ಮರುದಿನವೇ ಪ್ರಕಟಿಸಲಾಯಿತು. ಇದರಿಂದ ಬ್ರಿಟಿಷರು ಭಾರತವನ್ನು ಬೇಗ ಬಿಡುವರೆಂಬುದು ಭಾರತೀಯರಿಗೆ ಖಚಿತವಾಯಿತು. ಬ್ರಿಟಿಷರ ಈ ನಿರ್ಧಾರಕ್ಕೆ ನೌಕಾಸೇನಾ ಬಂಡಾಯವೇ ಕಾರಣವೆಂದು ಭಾವಿಸುವುದಕ್ಕಾಗುವುದಿಲ್ಲವಾದರೂ ರಾಜಕೀಯ ಅತೃಪ್ತಿ ಮತ್ತು ಅಸಮಾಧಾನಗಳು ನೌಕಾಸಿಬ್ಬಂದಿಗೂ ಹರಡಿದ್ದುದು ಬ್ರಿಟಿಷರಿಗೆ ಸ್ಪಷ್ಟವಾಯಿತು. ಭಾರತದ ಸೈನ್ಯಬಲದ ಅಚಲ ನಿಷ್ಠೆ ಮತ್ತು ವಿಧೇಯತೆಯ ಬಗ್ಗೆ ಅವರ ಸಂದೇಹ ದೃಢವಾಯಿತು. ಆದುದರಿಂದ ಬ್ರಿಟಿಷರಿಗೆ ಈ ಬಂಡಾಯ ಅಪಾಯ ಸೂಚಿಯಾಗಿ ಕಾಣಿಸಿತು.						    (ಎಂ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ